ಈ ಪ್ರೀತಿ ಅನ್ನೋ ಮಾಯೆ ಯನ್ನು ಗೆಲ್ಲೋದು ಬಹಳ ಕಷ್ಟ. ಈ ಪ್ರೀತಿಗಾಗಿ ಪ್ರತಿಯೊಬ್ಬ ಪ್ರೇಮಿಯೂ ನಾನಾ ರೀತಿಯ ಅವತಾರಗಳನ್ನು ಎತ್ತಲೇ ಬೇಕಾಗುತ್ತದೆ. ಅದೇ ರೀತಿ ಇಲ್ಲೊಂದು ವಿಭಿನ್ನ ಪ್ರೇಮಕಥೆ ತೆರೆದುಕೊಳ್ಳಲಿದೆ. ಈ ಹಿಂದೆ ಗಾನ ಬಜಾನ, ಲವ್ ಗುರು, ಜೂಮ್ ಚಿತ್ರಗಳಲ್ಲಿ ನವಿರಾದ ಪ್ರೀತಿ, ಚುರುಕಾದ ಹಾಸ್ಯವನ್ನು ನೀಡಿದ್ದ ನಿರ್ದೇಶಕ ಪ್ರಶಾಂತ್ ರಾಜ್ ಈ ಬಾರಿ ಪಕ್ಕಾ ಆಕ್ಷನ್ ಚಿತ್ರವನ್ನು ಕೈಗೆತ್ತಿಕೊಂಡು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಮುಂದಿನ ವಾರ ತೆರೆಕಾಣಲಿರುವ 'ದಳಪತಿ' ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಲಾವಿದರ ಡೇಟ್ಸ್ ಸಮಸ್ಯೆ, ವಿ.ಎಫ್.ಎಕ್ಸ್ ಕೆಲಸ ಇವುಗಳಿಂದ ಚಿತ್ರವು ಎರಡು ವರ್ಷ ಟೈಂ ತೆಗೆದುಕೊಂಡಿದೆ. ಈಗ ಬಿಡುಗಡೆಗೆ ಕಾಲ ಕೂಡಿಬಂದಿದೆ ಎಂದು ಚಿತ್ರದ ಕುರಿತಂತೆ ನಿರ್ದೇಶಕರು ಹೇಳಿಕೊಂಡರು.
ಪ್ರತಿಯೊಬ್ಬ ಹುಡುಗಿಯು ನನಗೆ ಇಂಥಾ ಹುಡುಗನೇ ಸಿಗಬೇಕು, ಗಂಡ ಆಗಬೇಕೆಂದು ಆಸೆ ಪಡುತ್ತಾರೆ. ಅದರಂತೆ ಪ್ರತಿ ಹುಡುಗನಿಗೆ ಇದೇ ರೀತಿಯ ಹುಡುಗಿ, ಹೆಂಡತಿಯಾಗಿ ಸಿಗಬೇಕೆಂದು ಬಯಸುವ ಹಾಗೆ ಚಿತ್ರ ಮೂಡಿ ಬಂದಿದೆಯಂತೆ. ರಾಮಾಯಣ-ಮಹಾಭಾರತದ ಅಂಶಗಳನ್ನು ತೆಗೆದುಕೊಂಡು ಎಂ.ಎಸ್. ರಮೇಶ್ ಸಂಭಾಷಣೆ ಬರೆದಿರುವುದು ಪ್ಲಸ್ ಪಾಯಿಂಟ್ ಆಗಿದ್ದು ಶರತ್ ಲೋಹಿತಾಶ್ವ, ಚಿಕ್ಕಣ್ಣ, ಪದ್ಮಜರಾವ್ ತೆರೆ ಹಂಚಿಕೊಂಡಿದ್ದಾರೆ.
ನಾಯಕ ನಟ ಪ್ರೇಮ್ ಮಾತನಾಡಿ ರಾಮ್ ಆಗಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ಸಮಯ ಸಂದರ್ಭ ನೋಡದೆ ಅವಳಿಗಾಗಿ ಕಲಿಯಾಗುತ್ತಾನೆ. ಶೇಕಡಾ 30ರಷ್ಟು ಮೃಧುವಾಗಿದ್ದು, ಉಳಿದಂತೆ ಹೋರಾಡುವ ಬಿಸಿ ರಕ್ತದ ಯುವಕನಾಗಿ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಇದೇ 18ರಂದು ಹುಟ್ಟುಹಬ್ಬಕ್ಕೆ ನಿರ್ಮಾಪಕರು ದಳಪತಿಯನ್ನು ಉಡುಗೊರೆಯಾಗಿ ಕೊಡುತ್ತಿದ್ದಾರೆ ಎಂದರು.
ನಾಯಕಿ ಕೃತಿ ಕರಬಂದ ಮಾತನಾಡಿ ಗೂಗ್ಲಿಯಲ್ಲಿ ಸ್ವಾತಿಯ ಪಾತ್ರ ಹೆಸರು ತಂದುಕೊಟ್ಟಂತೆ, ಇದರಲ್ಲಿ ವೈದಿಯಾಗಿ ಎಲ್ಲರಿಗೂ ಇಷ್ಟವಾಗುತ್ತೇನೆ. ಒಂದು ಸನ್ನಿವೇಶದಲ್ಲಿ ಆಯುಧವನ್ನು ಹಿಡಿದುಕೊಂಡಿದ್ದೇನೆ ಎಂದು ಹೇಳಿಕೊಂಡರು. ಸುಮಾರು 250 ಕೇಂದ್ರಗಳಲ್ಲಿ ಜಯಣ್ಣ ಸಂಸ್ಥೆಯ ಮೂಲಕ ಚಿತ್ರವನ್ನು ತೆರೆಗೆ ತರಲು ಯೋಜನ ಹಾಕಲಾಗಿದೆ ಎಂದು ನಿರ್ಮಾಪಕ ನವೀನ್ ಹೇಳಿಕೊಂಡರು.ಬಹಳಷ್ಟು ನಿರೀಕ್ಷೆಗಳೊಂದಿಗೆ ಬೆಳ್ಳಿ ಪರದೆ ಮೇಲೆ ದಳಪತಿ ಯಾವ ರೀತಿ ಅಬ್ಬರಿಸಲಿದ್ದಾನೆ ಎಂಬುದನ್ನು ನೋಡಬೇಕು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ